ಮಹಾಕವಿ ರನ್ನ

Ranna

ಹತ್ತನೆಯ ಶತಮಾನದಲ್ಲಿದ್ದ ರನ್ನ ಕರ್ನಾಟಕದ ಒಬ್ಬ ಹೆಮ್ಮೆಯ ಕವಿ. ಕವಿತ್ರಯರಲ್ಲಿ ಒಬ್ಬನಾದ ರನ್ನ ಬಿಜಾಪುರ ಜಿಲ್ಲೆಯ ಮುದುವೊಳಲಿನಲ್ಲಿ ಜನಿಸಿದನು. ತಂದೆ ಜಿನವಲ್ಲಭ, ತಾಯಿ ಅಬ್ಬಲಬ್ಬೆ ಕಸುಬಿನಲ್ಲಿ ಬಳೆಗಾರರಾಗಿದ್ದು, ಜೈನ ಮತಾವಲಂಬಿಗಳಾಗಿದ್ದರು.

ರನ್ನ ತನ್ನ ವಿದ್ಯಾಭ್ಯಾಸಕ್ಕಾಗಿ ಮುದುವೊಳಲಿನಿಂದ ಬಂಕಾಪುರಕ್ಕೆ ಹೋದನು. ಅಲ್ಲಿ ಅಜಿತಸೇನಾಚಾರ್ಯರ ನಿರ್ದೇಶನದಂತೆ ಆಚಾರ್ಯ ಲಲಿತಕೀರ್ತಿ ಪಂಡಿತರ ಬಳಿ ವಿದ್ಯಾಭ್ಯಾಸ ಮುಂದುವರೆಸಿದರು.

ಅಜಿತಸೇನಾಚಾರ್ಯರು ಗಂಗವಾಡಿಯ ದಂಡನಾಯಕ ಚಾವುಂಡರಾಯನನ್ನು ರನ್ನನಿಗೆ ಪರಿಚಯಿಸಿದರು. ಅಲ್ಪಕಾಲದಲ್ಲಿ ಚಾವುಂಡರಾಯ ಮತ್ತು ರನ್ನ ಆತ್ಮೀಯ ಸ್ನೇಹಿತರಾದರು. ರನ್ನನ ಸಹಕಾರದಿಂದ ಚಾವುಂಡರಾಯನು 'ತ್ರಿಷಷ್ಟಿಲಕ್ಷಣ ಮಹಾಪುರಣ' ಎಂಬ ಗ್ರಂಥವನ್ನು ಬರೆದನು.

ಅನಂತರ ರನ್ನನು ಚಾಲುಕ್ಯಚಕ್ರವರ್ತಿಯಾದ ತೈಲಪ ಮತ್ತು ಅವನ ಮಗ ಇರಿವ ಬೆಡಂಗರಲ್ಲಿ ಆಸ್ಥಾನಕವಿಯಾದನು. ಚಕ್ರವರ್ತಿಯ ಪ್ರೊತ್ಸಾಹದಿಂದ ರನ್ನನು ಕಾವ್ಯ ರಚನೆ ಮಾಡಿದನು. ತನ್ನ ಆಶ್ರಯದಾತನ ಕೀರ್ತಿಯನ್ನು ಬೆಳಾಗಿಸಲೆಂದು ಮಹಾಭಾರತದ ವೀರನಾದ ಭೀಮನೊಡನೆ ಅವನನ್ನು ಸಮೀಕರಿಸಿ, 'ಸಾಹಸಭೀಮವಿಜಯಂ' ಎಂಬ ಚಂಪೂ ಕಾವ್ಯವನ್ನು ರಚಿಸಿದನು. ಇದನ್ನು 'ಗದಾಯುದ್ಧ'ವೆಂದೇ ಕರೆಯುವುದು ರೂಢಿ. ಕಾವ್ಯವನ್ನು ಕೇಳಿ ಆನಂದಿಸಿದ ದೊರೆಯು ಅವನಿಗೆ 'ಕವಿಚಕ್ರವರ್ತಿ' ಎಂಬ ಬಿರುದನ್ನು ಕೊಟ್ಟನು.

ಕುರುಕ್ಷೇತ್ರದಲ್ಲಿ ಭೀಮದುರ್ಯೋಧನರಿಗೆ ನಡೆದ ಗದಾಯುದ್ಧವನ್ನು ರನ್ನ ತನ್ನ ಕಾವ್ಯದಲ್ಲಿ ಪ್ರಧಾನವಾಗಿಟ್ಟುಕೊಂಡು ಇಡೀ ಮಹಾಭಾರತದ ಕಥೆಯನ್ನು ಸಿಂಹಾವಲೋಕನ ಕ್ರಮದಿಂದ ತಿಳಿಸಿದ್ದಾನೆ. ಇದರಲ್ಲಿ ದುರ್ಯೋಧನನನ್ನು ಮಹಾನುಭಾವನನ್ನಾಗಿ ಚಿತ್ರಿಸಿದ್ದಾನೆ. ರನ್ನ ದುರ್ಯೋಧನನ ಆತ್ಮಾಭಿಮಾನವನ್ನು ಚಿತ್ರಿಸುವುದರ ಮೂಲಕ ನಮ್ಮಲ್ಲಿ ಆತ್ಮಾಭಿಮನವನ್ನು ಮೂಡಿಸುತ್ತಾನೆ.

ಅನಂತರ ರನ್ನನು ಅತ್ತಿಮಬ್ಬೆಯ ಆಶ್ರಯವನ್ನು ಪಡೆದನು. ಅವಳ ಅಪ್ಪಣೆಯಂತೆ 'ಅಜಿತ ತೀರ್ಥಂಕರ ಪುರಾಣ ತಿಲಕಂ' ಎಂಬ ಜೈನ ಗ್ರಂಥವನ್ನು ರಚಿಸಿದನು. ಇದರ ಆದಿ ಅಂತ್ಯಗಳಲ್ಲಿ ಅತ್ತಿಮಬ್ಬೆಯ ವೃತ್ತಾಂತವನ್ನೆಲ್ಲ ವಿವರಿಸಿ ಆಕೆಯ ದಾನಗುಣವನ್ನು ಪ್ರಶಂಸಿಸಿದ್ದಾನೆ. ಅಜಿತ ತೀರ್ಥಂಕರನ ಕಾಲದಲ್ಲಿ ಚಕ್ರವರ್ತಿ ಸಗರನ ಕಥೆಯು ಇದರಲ್ಲಿ ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ.

ರನ್ನನು ತನ್ನ ಪೋಷಕನಾದ ಚಾವುಂಡರಾಯನ ನೆನಪಿಗಾಗಿ ಮಗನ ಹೆಸರನ್ನು 'ರಾಯ' ಎಂದು ಮತ್ತು ಅತ್ತಿಮಬ್ಬೆಯ ನೆನಪಿಗಾಗಿ ಮಗಳ ಹೆಸರನ್ನು 'ಅತ್ತಿಮಬ್ಬೆ' ಯೆಂದು ನಾಮಕರಣ ಮಾಡಿದನು.

ಪರಶುರಾಮಚರಿತ, ಚಕ್ರೇಶ್ವರಚರಿತ ಎಂಬ ಕಾವ್ಯಗಳನ್ನೂ ರನ್ನನು ಬರೆದಿರುವುದಾಗಿ ತಿಳಿದು ಬಂದಿದ್ದರೂ ಆ ಗ್ರಂಥಗಳಾವುವೂ ದೊರೆತಿಲ್ಲ.

ಸಂಕ್ಷಿಪ್ತ ಪರಿಚಯ

ಜನನ ಕ್ರಿ.ಶ. 949
ತಂದೆ ಜಿನವಲ್ಲಭ
ತಾಯಿ ಅಬ್ಬಲಬ್ಬೆ
ಜನ್ಮ ಸ್ಥಳ ಮುಧೋಳ, ಬಾಗಲಕೋಟೆ ಜಿಲ್ಲೆ,

ಕೃತಿಗಳು

ಸಾಹಸಭೀಮ ವಿಜಯಂ (ಮಹಾಕವಿ ರನ್ನನ ಗದಾಯುದ್ಧ)
ಅಜಿತ ತೀರ್ಥಂಕರ ಪುರಾಣ ತಿಲಕಂ
ಚಕ್ರೇಶ್ವರ ಚರಿತ
ಪರಶುರಾಮ ಚರಿತ
ರನ್ನಕಂದ - ೧೨ ಕಂದಪದ್ಯಗಳ ನಿಘಂಟು.

ಬಿರುದುಗಳು

ಕವಿಚಕ್ರವರ್ತಿ
ಕವಿರತ್ನ
ಅಭಿನವ ಕವಿಚಕ್ರವರ್ತಿ
ಕವಿ ರಾಜಶೇಖರ
ಕವಿಜನ ಚೂಡಾರತ್ನ
ಕವಿ ತಿಲಕ
ಉಭಯಕವಿ